ಯಹೂದಿ-
 	ಸೆಮೆಟಿಕ್ ಬುಡಕಟ್ಟಿಗೆ ಸೇರಿದ ಜನ. ಅರಬ್ ಮರುಭೂಮಿಯ ಉತ್ತರ ಭಾಗದಲ್ಲಿ ಅಲೆಮಾರಿಗಳಾಗಿ ಜೀವಿಸುತ್ತಿದ್ದವರು. ಅವರಿಗೊಬ್ಬ ಅಧಿಪತಿ ಇರುತ್ತಿದ್ದ. ಕ್ರಿ,ಪೂ.ಸು.2 ಮಿಲಿಯ ವರ್ಷಗಳಿಗೂ ಹಿಂದೆ ತಮ್ಮ ಪ್ರಾಣಿಗಳಿಗೆ ಮೇವು ಸಂಪಾದಿಸಿಕೊಳ್ಳಲು ಅಲೆಯುತ್ತಿದ್ದರು. ಹೀಗೆ ಅಲೆಯುವಾಗ ಸಾಮಾನ್ಯವಾಗಿ ಝರಿಗಳ, ಓಯಸಿಸ್‍ಗಳ ಸಮೀಪ ಬೀಡುಬಿಡುತ್ತಿದ್ದರು.

	ಈ ಜನ ಸುಮೇರಿಯಾದ ಉರ್‍ನಿಂದ ಬಂದು ಪ್ಯಾಲಸ್ತೀನಿನಲ್ಲಿ ಕ್ರಿ.ಪೂ. ಸು. 2200 ವೇಳೆಗೆ ನೆಲೆಸಿದರು. ಮೋಸೆಸ್‍ನ ಕಾಲದಲ್ಲಿ ಅವರು ಈಜಿಪ್ಟಿನಾದ್ಯಂತ ವ್ಯಾಪಿಸಿದ್ದರು. ಬೈಬಲಿನಲ್ಲಿ ಕತೆಗಳು ಮತ್ತು ಧಾರ್ಮಿಕ ಸಾಹಿತ್ಯಗಳಿಂದ ಮೋಸೆಸ್‍ನ ಬಗೆಗೆ ಅನೇಕ ವಿವರಗಳು ತಿಳಿಯುತ್ತವೆ. ಬಾಲ್ಯದಿಂದಲೂ ಸಾಮಾಜಿಕವಾಗಿ ಕೆಳಮಟ್ಟದಲ್ಲಿದ್ದ ಹಾಗೂ ಜಾತಿಯಿಂದ ಬಹಿಷ್ಕರಿತರಾದವರ ಬಗೆಗೆ ಹೆಚ್ಚಿನ ಅನುಕಂಪ ಹೊಂದಿದ್ದ. ಯುಹೂದಿಗಳ ಪೂರ್ವೇತಿಹಾಸವನ್ನು ತಿಳಿದಾಗ ಅವನಿಗೆ ತನ್ನ ಜನರ ಬಗೆಗೆ ಅತೀವ ಅನುಕಂಪ ಉಂಟಾಯಿತು. ಒಮ್ಮೆ ನಿಷ್ಕರುಣಿಯಾದ ಈಜಿಪ್ಟಿಗನೊಬ್ಬ ಯಹೂದಿ ಗುಲಾಮನನ್ನು ಚಾಟಿಯಿಂದ ಥಳಿಸುತ್ತಿದ್ದುದನ್ನು ಕಂಡು ಅತಿ ಕ್ರುದ್ಧನಾದ. ಅವನನ್ನು ಕೊಂದು ಪಲಾಯನಮಾಡಿ ಮರಳುಗಾಡಿನಲ್ಲಿ ಆಶ್ರಯ ಪಡೆದ; ಮಿದಿಯಾನ್ ಎಂಬಲ್ಲಿ ತಂಗಿದ. ಅಲ್ಲಿ ಸಂಸಾರಿಯೂ ಅದ. ಆದರೆ ಯಹೂದಿಗಳನ್ನು ಮರೆಯಲು ಅವನಿಗೆ ಸಾಧ್ಯವಾಗಲಿಲ್ಲ. ಅವರನ್ನು ಮುಕ್ತಗೊಳಿಸಿ ಸ್ವತಂತ್ರ ರಾಷ್ಟ್ರವಾಗಿ ಸಂಘಟಿಸಬೇಕು, ಅವರಿಗೊಂದು ಧರ್ಮ, ದೇವರನ್ನು ಕಲ್ಪಿಸಬೇಕೆಂದು ತುಡಿಯುತ್ತಿದ್ದ. ಒಮ್ಮೆ ಪವಿತ್ರ ಹೋರೆಬ್ (ಮೌಂಟ್ ಸಿನಾಯ) ಪರ್ವತದ ಬಳಿ ತನ್ನ ಮಾವನ ಕುರಿಗಳನ್ನು ಕಾಯುತ್ತಿದ್ದಾಗ ಅವನಿಗೆ ದೈವ ಸಾಕ್ಷಾತ್ಕಾರವಾಯಿತು. ಅದು ಅವನ ಹಾಗೂ ಯಹೂದಿ ಜನರ ಭವಿಷ್ಯವನ್ನು ರೂಪಿಸಿತು. ಮುಂದಿನ ದಿನಗಳಲ್ಲಿ ಈಜಿಪ್ಟನ್ನು ಪ್ರವೇಶಿಸಿ ಯಹೂದಿಗಳು ದಂಗೆ ಏಳುವಂತೆ ಮಾಡಿದ. ಮೋಸೆಸ್ ಗುಲಾಮರನ್ನು ಮುಕ್ತಗೊಳಿಸಬೇಕೆಂದು ದೊರೆ ಫೇರೋನನ್ನು ಕೋರಿದ. ಕಠಿಣಹೃದಯಿಯಾದ ಫೇರೋ ಯಹೂದಿಗಳನ್ನು ಮತ್ತಷ್ಟು ತುಚ್ಛವಾಗಿ ನಡೆಸಿಕೊಂಡ. ಆಗ ದೇವರಾದ ಯಹೋವ ಈಜಿಪ್ಟಿನ ಮೇಲೆ ಹತ್ತು ಮಾರಕ ಪೀಡೆಗಳನ್ನು ಕಳಿಸಿದ. ಮೋಸೆಸ್ ಯಹೂದಿಗಳನ್ನು ಬಿಡುಗಡೆಗೊಳಿಸಿ ಪವಿತ್ರ ಪರ್ವತದ ಬಳಿಗೆ ಒಯ್ದಾಗ ದೇವರು ಮತ್ತು ಯಹೂದಿಗಳ ನಡುವೆ ಒಡಂಬಡಿಕೆ ಆಯಿತೆಂದೂ ಪ್ರತೀತಿ. ಆದ್ದರಿಂದಲೇ ದೇವರ ದಶಾಜ್ಞೆಗಳು (ಟೆನ್ ಕಮಾಂಡ್ ಮೆಂಟ್ಸ್) ರೂಪಿತವಾದುದ್ದು. ಒಡಂಬಡಿಕೆಯಿಂದಾಗಿ ಯಹೂದಿಗಳು ತಾವು ದೇವರಿಂದ ಆರಿಸಲ್ಪಟ್ಟ ವಿಶೇಷ ಜನರೆಂದು ನಂಬುತ್ತಾರೆ.

 	ಕ್ರಿಸ್ತನಿಗೆ ಮೊದಲು ಸು. 1300 ವರ್ಷಗಳ ಹಿಂದೆ ಮೋಸೆಸ್ ಯಹೂದಿಗಳನ್ನು ಹೀಗೆ ಮುಕ್ತಗೊಳಿಸಿ ಫಲವತ್ತಾದ ಕೇನನ್ ನಾಡಿಗೆ ಒಯ್ದ. ಜೋರ್ಡಾನ್ ನದಿ ಮತ್ತು ಮೆಡಿಟರೇನಿಯಮ್ ಸಮುದ್ರಗಳ ನಡುವಿನ ಈ ಸ್ಥಳದಲ್ಲಿ 300 ವರ್ಷಗಳ ತನಕ ಯಹೂದಿಗಳೂ ಕೇನನ್ ಮೂಲವಾಸಿಗಳಿಗೂ ನಿರಂತರ ಕದನವಾಯಿತು. ಯಹೂದಿಗಳ ಮೊದಲ ರಾಜ ಸೋಲ್; ಇವನ ಅನಂತರ ಬಂದ ಡೇವಿಡ್ ಎರಡೂ ಗುಂಪುಗಳನ್ನು ತಾತ್ಕಲಿಕವಾಗಿ ಒಂದುಗೂಡಿಸುವಲ್ಲಿ ಸಫಲನಾದ. ತರುವಾಯ ಅವನ ಮಗ ಸೋಲೆಮ್ ಕಾಲದಲ್ಲಿ ಜೆರುಸಲೆಮಿನ ಸಂಪತ್ತು ಹೆಚ್ಚಿತು. ಯಹೋವ ಎಂಬಾತ ದೇವಾಲಯವನ್ನು ಕಟ್ಟಿಸಿದ. ಯಹೂದಿಗಳು ಏಕದೇವನಿಷ್ಠರಾದದ್ದು ಆಗಲೇ ಡೇವಿಡನ ತರುವಾಯ ಇಸ್ರೇಲ್ ಎರಡು ಸ್ವತಂತ್ರ ರಾಜ್ಯಗಳಾಗಿ ಒಡೆಯಿತು. ಉತ್ತರದ ದೊಡ್ಡರಾಜ್ಯ ಇಸ್ರೇಲ್ ಮತ್ತು ದಕ್ಷಿಣದ ಸಣ್ಣರಾಜ್ಯ ಜೂಡಾ. ಅನಂತರದ 400 ವರ್ಷಗಳಲ್ಲಿ ರಾಜ್ಯಗಳನ್ನು ಕಬಳಿಸಿದವು. ಕ್ರಿ.ಪೂ. ಸು. 42-63ರ ನಡುವಿನ ಹ್ಯಾಸ್‍ಮೋನಿಯನ್ ಕಾಲದ ಹೊರತಾಗಿ ಯಹೂದಿಗಳು ರಾಜಕೀಯ ಸ್ವಾತಂತ್ರ್ಯವನ್ನು ಕಂಡದ್ದು ಈ ಶತಮಾನದಲ್ಲಿಯೇ.

 	ಧರ್ಮ : ಕ್ರಿ.ಪೂ. ಸು.2000 ವರ್ಷ ಹಿಂದೆಯೇ ಈ ಧರ್ಮದ ಉಗಮವನ್ನು ಗುರುತಿಸಬಹುದು. ಕಲ್ಲು, ಗಿಡಗಳು, ಕುರಿ, ಹಸು, ಪರ್ವತಗಳನ್ನು ಪೂಜಿಸುತ್ತಿದ್ದ ಅಲೆಮಾರಿಗಳಾದ ಈಜನ ಯಹೊವನೆಂಬ ರಾಷ್ಟ್ರೀಯ ದೇವತೆಯನ್ನು ಕಲ್ಪಿಸಿಕೊಂಡು ಏಕದೇವತಾ ನಿಷ್ಠರಾದರು. ನಿರಂತರ ಆಕ್ರಮಣಗಳಿಗೆ ಒಳಗಾದ ಯಹೂದಿಗಳಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿದವರು ಅನೇಕ ಪ್ರವಾದಿಗಳು. ಕಾಲಕಾಲಕ್ಕೆ ಬಂದ ಧಾರ್ಮಿಕ ವ್ಯಕ್ತಿಗಳ ಬೋಧನೆಯೇ ಯಹೂದಿಗಳ ಪವಿತ್ರ ಗ್ರಂಥ.

 	ಯಹೂದೀ ಧರ್ಮಕ್ಕೂ ಕ್ರೈಸ್ತ ಧರ್ಮಕ್ಕೆ ನಿಕಟ ಸಂಬಂಧವಿದೆ. ಯಹೂದಿ ಧರ್ಮವೇ ತಳಹದಿ. ಕ್ರಿಸ್ತ ಮತ್ತು ಅವನ ಹನ್ನೆರಡು ಮಂದಿ ಶಿಷ್ಯರು ಯಹೂದಿ ವಂಶದಲ್ಲಿಯೇ ಜನಿಸಿದರು. ಕ್ರಿಸ್ತನ ಬೋಧನೆಗಳಲ್ಲಿ ಪ್ರತಿಫಲವಾಗಿ ಇರುವುದು ಯಹೂದಿ ಧರ್ಮಶಾಸ್ತ್ರ ಸಂಪ್ರದಾಯಗಳೇ. ಏಕದೇವೋಪಾಸನೆ, ಸೃಷ್ಟಿಕ್ರಮ, ಆಡಂ ಮತ್ತು ಈವ್ ಅವರ ಅವಿಧೇಯತೆ, ಹತ್ತು ದೈವಾಜ್ಞೆಗೂ, ಋಜುಮಾರ್ಗ ಮತ್ತು ಪ್ರೇಮ, ರಕ್ಷಕ ದೇವನಾದ ಮೆಸೈಯನ ನಿರೀಕ್ಷೆ-ಇವು ಎರಡರಲ್ಲೂ ಸಮಾನ ಅಂಶಗಳು. ಹಿಬ್ರೂ ಪವಿತ್ರ ಗ್ರಂಥಗಳನ್ನೇ ಕ್ರೈಸ್ತರು `ಹಳೆಯ ಒಡಂಬಡಿಕೆ ಎನ್ನುವುದು. ಕ್ರೈಸ್ತರ ದೃಷ್ಟಿಯಲ್ಲಿ ಯಹೂದಿಗಳು ಕ್ರಿಸ್ತನನ್ನು ಮಾನ್ಯಮಾಡಲು ವಿಫಲರಾದ ಸೋದರರು.

 	ಯಹೂದಿಗಳು ಹಾಗೂ ಕ್ರೈಸ್ತರು ತಮ್ಮ ಧರ್ಮ ಗ್ರಂಥವನ್ನು `ಬೈಬಲ್ ಎಂದೇ ಕರೆಯುತ್ತಾರೆ. ಗ್ರೀಕ್ ಪದದಿಂದ ಹುಟ್ಟಿಕೊಂಡ ಈ ಪದದ ಅರ್ಥ `ಅಧ್ಯಾಯಗಳು ಎಂದು. ಈಗ ಲಭ್ಯವಿರುವಂತೆ ಯಹೂದಿಗಳ ಧರ್ಮಗ್ರಂಥದ ಅತ್ಯಂತ ಹಳೆಯ ಪ್ರತಿ ಕ್ರಿ.ಪೂ. ಎರಡನೆಯ ಶತಮಾನದಷ್ಟು ಪ್ರಾಚೀನವಾದುದು. ಅದರ ಭಾಷೆ ಪ್ರಧಾನವಾಗಿ ಹಿಬ್ರೂ ಅದ್ದರಿಂದ `ಹಿಬ್ರೂ ಬೈಬಲ್ ಎಂದೂ ಹೆಸರಿದೆ. ಇದನ್ನೇ ಕ್ರೈಸ್ತರು ತಮ್ಮ ಬೈಬಲ್‍ನಲ್ಲಿ ಹಳೆಯ ಒಡಂಬಡಿಕೆ ಎಂದು ಕರೆದಿದ್ದಾರೆ.

 	ಹಿಬ್ರೂ ಬೈಬಲನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ :

 	1 ಬೋಧನೆಗಳು : ಇದಕ್ಕೆ `ತೋರಾ ಎನ್ನುತ್ತಾರೆ. ಜೆನೆಸಿನ್, ಎಕ್ಸೋಡಸ್, ಲೆವಿಟಿಕಸ್, ನಂಬರ್ಸ್ ಮತ್ತು ಡೆಟರೋನಮಿ ಎಂಬ ಐದು ಅಧ್ಯಾಯಗಳು ಇದರಲ್ಲಿವೆ. ಪೆಂಟಚ್ ಎಂದೂ ಇವಕ್ಕೆ ಹೆಸರು. ಜಗತ್ತಿನ ಸೃಷ್ಟಿ, ಕುಲ ಗುರುಗಳಾದ ಅಬ್ರಹಾಂ, ಇಸಾಕ್, ಜಾಕಬ್, ಜೋಸೆಫ್‍ರ ಕತೆ, ಮೋಸೆಸ್ ಯಹೂದಿಗಳನ್ನು ಬಿಡುಗಡೆಗೊಳಿಸಿ ಕೇನನ್‍ಗೆ ಒಯ್ದವರೆಗಿನ ಕತೆ, ದೇವರು ಮೋಸೆಸ್‍ನಿಗೆ ಬೋಧಿಸಿದ ಶಾಸನಗಳೂ ಇದರಲ್ಲಿವೆ. ಇದರಲ್ಲಿ ಬರುವ ದಶಾಜ್ಞೆಗಳು ಹೀಗಿವೆ :

 	1 ಈಜಿಪ್ಟಿನಿಂದಲೂ ಗುಲಾಮಿಕೆಯಿಂದಲೂ ನಿಮ್ಮನ್ನು ಬಿಡುಗಡೆಗೊಳಿಸಿದ ದೇವ ನಾನು. 2 ನನ್ನ ಹೊರತು ನೀವು ಅನ್ಯದೇವರನ್ನು ಶರಣುಹೋಗಬಾರದು. ಸ್ವರ್ಗ ಭೂಮಿ ಅಥವಾ ಸಮುದ್ರ ತಳದ ಯಾವ ಪ್ರತಿಮೆಯನ್ನೂ ಪೂಜಿಸತಕ್ಕದ್ದಲ್ಲ. ಅಸೂಯಾಪರ ದೇವತೆಯಾದ ನಾನು, ನನ್ನನ್ನು ದ್ವೇಷಿಸುವವರ ಪಾಪಕ್ಕಾಗಿ ಅವರ ಪೀಳಿಗೆಯನ್ನು ಮೂರು ಅಥವಾ ನಾಲ್ಕು ತಲೆಮಾರುಗಳ ತನಕ ಕಾಡುತ್ತೇನೆ. ನನ್ನನ್ನು ಪೂಜಿಸಿ ನನ್ನ ಅಜ್ಞೆಗಳನ್ನು ಪರಿಪಾಲಿಸುವವರಿಗೆ ನಾನು ದಯಾಪರನಾಗಿರುತ್ತೇನೆ. 3 ವ್ಯರ್ಥವಾಗಿ ದೇವರ ಹೆಸರು ಬಳಸಬೇಡಿ. ಹಾಗೆ ಮಾಡಿದವನು ಪಾಪಿ ಎಂದೇ ಪರಿಗಣಿತನಾಗುತ್ತಾನೆ. 4 ಸಬ್ಬತ್ ದಿನವನ್ನು ನೆನಪಿಡು ಮತ್ತು ಅದರ ಪಾವಿತ್ರ್ಯವನ್ನು ಕಾಯ್ದುಕೊ. ಆರು ದಿನಗಳಲ್ಲಿ ದೇವರು ಸ್ವರ್ಗ, ಭೂಮಿ, ಸಮುದ್ರ, ಹಾಗೂ ಅವುಗಳಲ್ಲಿರುವುದನ್ನೆಲ್ಲಾ ಸೃಷ್ಟಿಸಿದ. ಏಳನೆಯ ದಿನ ವಿಶ್ರಾಂತಿ ಪಡೆದ. ಆ ಕಾರಣದಿಂದಲೇ ದೇವರು ಸಬ್ಬತ್ ದಿನವನ್ನು ಕರುಣಿಸಿ ಅದನ್ನು ಪವಿತ್ರಗೊಳಿಸಿದ. ನೀನು ಆರು ದಿನಗಳಲ್ಲಿ ಎಲ್ಲ ಕೆಲಸವನ್ನು ಮಾಡು ಅದರೆ ಏಳನೆಯ ದಿನವಾದ ಪವಿತ್ರ ಸಬ್ಬತ್ ದಿನಗಳಲ್ಲಿ ನೀನಾಗಲಿ, ನಿನ್ನ ಮಗ, ಮಗಳು, ಗಂಡಾಳು, ಹೆಣ್ಣಾಳು, `ಆಕಳು ಆಗಂತಕರು ಯಾರೂ ದುಡಿಯಬಾರದು. 5 ನಿನ್ನ ತಂದೆ ತಾಯಿಗಳನ್ನು ಗೌರವಿಸು. 6 ಕೊಲ್ಲಬೇಡ, 7 ವ್ಯಭಿಚಾರವೆಸಗಬೇಡ, 8 ಕಳಬೇಡ, 9 ನಿನ್ನ ನೆರೆಯವನ ವಿರುದ್ಧ ಸುಳ್ಳು ಸಾಕ್ಷ್ಯ ಹೇಳಬೇಡ. 10 ನಿನ್ನ ನೆರೆಯವನ ಮನೆ, ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಅಥವಾ ಯಾವುದನ್ನೂ ಆಶಿಸಬೇಡ.

 	ಇವೇ ಯಹೂದಿ ಧರ್ಮದ ಮೂಲದಲ್ಲಿದ್ದು ಅವರನ್ನು ಪ್ರಭಾವಿತಗೊಳಿಸಿರುವುದು. ಅವುಗಳಿಗೆ ಅತಿನಿಷ್ಠೆಯಿಂದ ಇರಬೇಕಾದುದನ್ನು ಮೋಸೆಸನಿಂದ ಮೊದಲ್ಗೊಂಡು ಎಲ್ಲ ಪ್ರವಾದಿಗಳೂ ಒತ್ತಿ ಹೇಳಿದ್ದಾರೆ.

	2 ಪ್ರವಾದಿಗಳು : ಈ ಭಾಗದಲ್ಲಿ ಪ್ರಾಚೀನ ಪ್ರವಾದಿಗಳಾದ ಜೋಷುವ, ಜಡ್ಜಸ್, ಸಾಮ್ಯುಯಲ್, ಕಿಂಗ್ಸ್ ಮತ್ತು ಅನಂತರದ ಪ್ರವಾದಿಗಳಾದ ಇಸಯ, ಜೆರೆಮಯ, ಎeóÉಕಿಲ್ ಹಾಗೂ ಇತರ ಹನ್ನೆರಡು ಉಪಪ್ರವಾದಿಗಳ ವಿವರಗಳಿವೆ. ಪ್ರಾಚೀನ ಇಸ್ರೇಲಿನ ಕ್ರಿ.ಪೂ. 11ನೆಯ ಶತಮಾನದ ಮಧ್ಯಭಾಗದಲ್ಲಿ ಪ್ರವಾದಿಗಳ ಚಟುವಟಿಕೆ ಚುರುಕಾಯಿತು. ಕ್ರಿ.ಪೂ.11 ರಿಂದ 8 ನೆಯ ಶತಮಾನದ ತನಕ ಪ್ರವಾದಿಗಳು ತಮ್ಮ ಕಾರ್ಯಸಾಧನೆಗೆ ಗಮನವಿತ್ತರು; ಬರವಣಿಗೆಗೆ ಇಳಿಯಲಿಲ್ಲ. ಕ್ರಿ.ಪೂ. 8 ರಿಂದ 6 ನೆಯ ಶತಮಾನದ ತನಕ ಪ್ರಾಚೀನ ಇಸ್ರೇಲಿನ ಧಾರ್ಮಿಕ ಮತ್ತು ನೈತಿಕ ಜೀವನ ಸ್ವರೂಪವನ್ನು ರೂಪಿಸಿದರು. ಯಹೂದಿ ಧರ್ಮದ ಪ್ರಗತಿ, ವಿಕಾಸ ಮತ್ತು ಸ್ವರೂಪವನ್ನು ರೂಪಿಸಿದರು. ಯಹೂದಿ ಧರ್ಮದ ಪ್ರಗತಿ, ವಿಕಾಸ ಮತ್ತು ಸ್ವರೂಪಕ್ಕೆ ಇವರೇ ಕಾರಣರು. ಯಹೋವನನ್ನು ಜಾಗತಿಕ ದೇವತೆಯಾಗಿ ಕಲ್ಪಿಸಿದ್ದು ಇವರೇ. ಧರ್ಮಾಚರಣೆಗಿಂತ ನೀತಿಗೆ ಹೆಚ್ಚು ಒತ್ತುಕೊಟ್ಟರು.

	3 ಸಾಹಿತ್ಯ : ಇದರಲ್ಲಿ ಕಾವ್ಯ (ಸ್ಸಾಮ್ಸ್, ಪ್ರಾವಬ್ರ್ಸ್, ಜಾಬ್), 5 ಸ್ಕ್ರಾಲ್‍ಗಳು ಸಾಂಗ್‍ಆಫ್ ಸೋಲೋಮನ್, ರೂತ್, ಲಾಮೆಂಟೇಷನ್ಸ ಎಕ್ಲೆಸಿ (ಯಾಸ್ಟ್ ಮತ್ತು ಎಸ್ತರ), ಚರಿತ್ರೆ (ಎಜ್ರಾ-ನೆಹೆಮಿಯ, ಕ್ರಾನಿಕಲ್ಸ್), ಭವಿಷ್ಯ (ಡಾನಿಯಲ್) ಎಂಬ ವಿಷಯ ವಿವರಗಳಿವೆ. ಯಹೂದಿ ಧರ್ಮದ ಸ್ಫೂರ್ತಿದಾಯಕ ಬುದ್ಧಿಮತ್ತೆ ಇರುವುದು ಅವರ ಸಾಹಿತ್ಯದಲ್ಲಿ. ಕಾವ್ಯ, ಗಾದೆ, ತತ್ತ್ವದರ್ಶನದ, ವೈವಿಧ್ಯಪೂರ್ಣ ಸಂಗ್ರಹ ಇದು. ಜಾಣ್ನುಡಿಗಳು, ಸ್ತುತಿಗೀತೆಗಳು, ಒಳಿತು ಕೆಡಕುಗಳ ತರ್ಕ ಇಲ್ಲಿದೆ. ಜಾಬ್ ತನ್ನ ತತ್ತ್ವದರ್ಶನದಂತೆಯೇ ಕಾವ್ಯೋನ್ನತಿಯಲ್ಲಿಯೂ ಅಪೂರ್ವವಾದುದನ್ನು ಸೃಷ್ಟಿಸಿದ. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ವ್ಯವಹಾರಿಕ, ಸಾರ್ವಜನಿಕ ವ್ಯವಹಾರಗಳು, ನುಡೆನುಡಿ, ನೀತಿ-ಇವುಗಳ ದರ್ಶನ ಅವರ ವಸ್ತುಗಳಾಗಿದ್ದುವು.

	ಹಳೆಯ ಒಡಂಬಡಿಕೆ ಧರ್ಮಸೂತ್ರ ಮಾತ್ರವಾಗಿರದೆ, ಉನ್ನತ ಮಟ್ಟದ ಚರಿತ್ರೆ, ಕಾವ್ಯ, ತತ್ತ್ವಶಾಸ್ತ್ರ ಕೂಡ ಆಗಿದೆ. ಅದು ಸೃಷ್ಟಿಯ ಕತೆಯೊಂದಿಗೆ ಪ್ರಾರಂಭವಾಗಿ ಎಜ್ರಾನ ಕಾಲ ಮತ್ತು ಅವನು ಮಾಡಿದ ಸುಧಾರಣೆಗಳನ್ನು ಒಳಗೊಂಡಿದೆ.

	ಹಿಬ್ರೂ ಬೈಬಲ್ ಮುಗಿದು ಅದು ಸಂಕಲನವಾಗುವ ವೇಳೆಗೆ ಯಹೂದಿ ಧರ್ಮದಲ್ಲಿ ಅಪಾರ ಬದಲಾವಣೆಗಳಾಗಿದ್ದವು. ಈ ಬದಲಾವಣೆಗಳಿಂದಾಗಿ ಬರವಣಿಗೆಯಲ್ಲಿದ್ದ ಧರ್ಮಸೂತ್ರಗಳನ್ನು ವಿವಿಧ ಬಗೆಗಳಲ್ಲೂ ಅರ್ಥವಿಸಲಾಯಿತು. ಈ ಮೌಖಿಕ ಸಂಪ್ರದಾಯಕ್ಕೆ ಬೈಬಲಿನಷ್ಟೇ ಗೌರವ ಸಂದಿತು. ಇದೇ 63 ವಿಭಾಗಗಳುಳ್ಳ 6 ಗ್ರಂಥಗಳಾಗಿ ಲಿಖಿತವಾಯಿತು. ಹಿಬ್ರೂ ಭಾಷೆಯಲ್ಲಿ ಬಂದ ಈ ಗ್ರಂಥಕ್ಕೆ ಮಿಶ್ನಾ ಎಂದು ಹೆಸರು. ಮುಂದೆ ಯಹೂದಿಗಳ ಬಳಕೆಯ ಭಾಷೆ ಅರಾಮಿಕ್ ಆದಾಗ ಈ ಗ್ರಂಥಕ್ಕೂ ವ್ಯಾಖ್ಯಾನದ ಅಗತ್ಯ ಬಂತು. ಇಂಥ ವ್ಯಾಖ್ಯಾನದ ಗ್ರಂಥವೇ `ಜೆಮರಾ ಇವೆರಡೂ ಸೇರಿ ಇರುವ ನಲವತ್ತು ಗ್ರಂಥಗಳಿಗೆ ಒಟ್ಟಾಗಿ `ಟಾಲ್ಮಡ್ ಎಂಬ ಹೆಸರಿದೆ. ಇದರಲ್ಲೂ ಪ್ಯಾಲಸ್ತೀನ್ ಮತ್ತು ಬ್ಯಾಬಿಲೋನಿಯಾಗಳ ಎರಡು ಸಂಪ್ರದಾಯಗಳಿವೆ. ಈಗ ಯಾವುದೇ ಧಾರ್ಮಿಕ ವ್ಯವಹಾರಕ್ಕೆ ಬ್ಯಾಬಿಲೋನಿಯಾ ಟಾಲ್ಮಡ್ ಆಧಾರವಾಗುತ್ತದೆ.

ಮಿದ್ರಶ್ ಎಂದರೆ ಅನ್ವೇಷಣೆ. ಇವು ಧಾರ್ಮಿಕ ಗ್ರಂಥಗಳ ವ್ಯಾಖ್ಯಾನಗಳು. ಹಿಬ್ರೂ ಬೈಬಲಿನ ಅನಂತರ ಯಹೂದಿಗಳು ಅತಿ ಪವಿತ್ರವೆಂದು ಹಣಿಸುವುದು 'ಟಾಲ್ಮಡ್ ಮತ್ತು 'ಮಿದ್ರಶ್‍ಗಳನ್ನು ಇವುಗಳ ಆಧಾರದಿಂದ ಯಹೂದಿ ಧರ್ಮದ ತತ್ತ್ವ, ನಂಬಿಕೆ ಮತ್ತು ಆಚಾರಗಳನ್ನು ಹೀಗೆ ಸಂಗ್ರಹಿಸಬಹುದು: ಯಹೂದಿ ಧರ್ಮ ಕಟ್ಟುನಿಟ್ಟಿನ ಏಕದೇವೋಪಾಸನೆಯನ್ನು ಪಾಲಿಸುವಂಥದು. ದೇವರು ಏಕಮೇವಾದ್ವಿತೀಯ, ಶರೀರರಹಿತ, ನ್ಯಾಯಪಕ್ಷಪಾತಿ, ಸತ್ಯ-ಸೌಂದರ್ಯ ದಯೆಗಳ ದಿವ್ಯ ಆಗರ. ಎಲ್ಲರನ್ನೂ ಶುದ್ಧಗೊಳಿಸುವ ಶಕ್ತಿ ಇರುವುದೇ ಅವನ ವಿಶೇಷ ಲಕ್ಷಣ. ಅವನ ಅಂತರ್ಯಾಮಿತ್ವಕ್ಕಿಂತಲೂ ಅವರು ಲೋಕಾತೀತವನೆಂಬ ಭಾವನೆಗೆ ಹೆಚ್ಚಿನ ಒತ್ತು ಇದೆ. ದೇವರಸ್ತಿತ್ವಕ್ಕೆ ಈ ಸೃಷ್ಟಿಯೇ ಸಾಕ್ಷಿ. ಅವನು ಅರಿಯದ ಯಾವುದೂ ಈ ಜಗತ್ತಿನಲ್ಲಿಲ್ಲ. ಭೂಮಿಯ ಜನರ ಪಾಪಗಳ ಕಾರಣದಿಂದಾಗಿ ಅವನ ಸಾನ್ನಿಧ್ಯ ದೂರವಾಯಿತು. ಸಂಪ್ರದಾಯ, ಶ್ರದ್ಧೆ ಮತ್ತು ಪ್ರಜ್ಞೆಯ ಮೂಲಕ ಅವನನ್ನು ಅರಿಯಬಹುದು. ಸಾರ್ವಭೌಮನಾದ ಯಹೋದ ತನ್ನ ಆಜ್ಞೆಗಳನ್ನು ಉಲ್ಲಂಘಿಸಿದವರನ್ನು ಸಮರ್ಥವಾಗಿ ದಂಡಿಸುತ್ತಾನೆ. ಆದರೆ ಅದು ತಂದೆ ಮಕ್ಕಳನ್ನು ಶಿಕ್ಷಿಸುವಂತೆ ವಾತ್ಸಲ್ಯ ಪೂರ್ಣವಾದುದು. ಅವನನ್ನು ನಿರಂತರವಾಗಿ ಪೂಜಿಸಬೇಕು, ಸೇವಿಸಬೇಕು. ಸಂತೃಪ್ತಿ, ಭಕ್ತಿ ಅಥವಾ ಅರ್ಪಣ, ಉತ್ಸಾಹ-ಈ ಮೂರು ಭಕ್ತನಲ್ಲಿರಬೇಕಾದ ಪ್ರಮುಖ ಗುಣಗಳು. ದೇವರನ್ನು ಪ್ರೀತಿಸುವುದೆಂದರೆ ಅವನ ಸಾನ್ನಿಧ್ಯದ ಉತ್ಕಟ ಹಂಬಲ, ಅವನ ಪಾವಿತ್ರ್ಯದ ಅಕಲಂಕ ಅನುಸರಣ, ಅವನ ತತ್ತ್ವಗಳ ಅಧ್ಯಯನ ಹಾಗೂ ಚಿಂತನ, ಮೂರ್ತಿಪೂಜೆ ಇಲ್ಲಿ ನಿಷಿದ್ಧ.

ಪ್ರಾರ್ಥನೆ ಮತ್ತು ಪಶ್ಚಾತ್ತಾಪಕ್ಕೆ ಈ ಧರ್ಮದಲ್ಲಿ ಮಿಗಿಲಾದ ಸ್ಥಾನವಿದೆ. ಪ್ರಾರ್ಥನೆ ಭಕ್ತನನ್ನು ಉದಾತ್ತಗೊಳಿಸುತ್ತದೆ. ದೇವರದಯೆಯಿಂದ ಕಾರ್ಯಗಳು ಬೇಗ ಸಿದ್ಧಿಸುತ್ತದೆ. ಎಲ್ಲ ಯಹೂದಿಗಳು ಪಶ್ಚಾತ್ತಾಪಕ್ಕೆ ಮಹತ್ತ್ವ ಕೊಟ್ಟಿದ್ದಾರೆ. ಸ್ವರ್ಗದಬಾಗಿಲು ಪ್ರಾರ್ಥನೆಗೆ ಮುಚ್ಚಿರಬಹುದು; ಕಣ್ಣೀರಿಗೆ ಮುಚ್ಚಿರುವುದಿಲ್ಲ.

ಅನುಭಾವ ಮತ್ತು ಅನುಭಾವಿಗಳಿಗೆ ಇಲ್ಲಿ ಸ್ಥಾನವಿದೆ. ಈ ಮತದ ಅನುಭಾವ ಪಂಥಕ್ಕೆ 'ಹಾಸೆಡಿಸಮ್ ಎಂದು ಹೆಸರು. 'ಕಬ್ಬಾಲಗಳು ಆಗಮಗಳು. ಇವುಗಳಲ್ಲಿ ಭಗವಂತನೊಡನೆ ಸೌಯುಜ್ಯ ಪಡೆಯುವ ಪ್ರಯತ್ನಗಳಿವೆ. ಇದೊಂದು ರೀತಿಯ ಯೋಗವೂ ಹೌದು.

ಮನುಷ್ಯನ್ನು ದೇವರ ಹೋಲಿಕೆಯಲ್ಲಿ ಸೃಷ್ಟಿಸಲಾಗಿದೆ; ಆದ್ದರಿಂದಲೇ ಆತ ದೇವರಿಗೆ ಅತ್ಯಂತ ಪ್ರಿಯನಾಗಿದ್ದಾನೆ. ಪ್ರೀತಿಯ ಲೇಪದಿಂದ ದೈವಿಕನಾಗುವುದು ಅವನ ಗುರಿ. ವಿರಕ್ತಿಗಿಂತಲೂ ಸಂಸಾರವೇ ಯೋಗ್ಯ ಕಾರ್ಯಸ್ಥಾನ. ಗರ್ವ, ಅಸತ್ಯ, ಮುಗ್ಧರನ್ನೂ ಪವಿತ್ರರನ್ನೂ ಹಿಂಸಿಸುವುದು, ದುಷ್ಟವಿಚಾರಚಿಂತನೆ, ಉಪದ್ರವ, ಸುಳ್ಳುಸಾಕ್ಷಿ, ವೈಷಮ್ಯದ ಬೀಜಬಿತ್ತುವುದು ಕೆಟ್ಟ ಗುಣಗಳು. ವಾದ ಮಾಡಬಾರದು, ಪರರನ್ನು ಪೀಡಿಸಬಾರದು. ದ್ವೇಷಿಸಬಾರದು, ಸುಳ್ಳು ಶಪಥಗಳನ್ನು ಮಾಡಬಾರದು, ಸಿಟ್ಟು ಕೂಡದು ಮುಂತಾದವು ಅವನಿಗೆ ಕೊಟ್ಟಿರುವ ನಿರ್ದೇಶನಗಳು. ಮಾನವನ ಅಸ್ತಿತ್ವದ ನಿಜವಾದ ಗುರಿ ಫಲಾಪೇಕ್ಷೆ ಇಲ್ಲದೆ ಒಳ್ಳೆಯದು ಮಾಡುವುದು; ಕೆಟ್ಟದ್ದನ್ನು ಕೆಟ್ಟದ್ದು ಎಂಬುದಕ್ಕಾಗಿಯೇ ಮಾಡದಿರುವುದು; ಶಿಕ್ಷೆಯ ಹೆದರಿಕೆಯಿಂದಲ್ಲ. ಒಳ್ಳೆಯವ ಕಷ್ಟಪಡುವುದು, ಕೆಟ್ಟವ ಸುಖ ಪಡುವಂಥ ಹೊರನೋಟ ಸಾಕ್ಷ್ಯಗಳು ಸನ್ಮಾರ್ಗಕ್ಕೆ ಆಧಾರವಲ್ಲ ಎಂಬುದು ಅದರ ವಿವರಣೆ. ಈ ಧರ್ಮ ಅಶಾಶ್ವತವಾದ ಬದುಕಿನಲ್ಲಿ ನಮ್ಮ ತೀವ್ರ ಶ್ರಮಗಳನ್ನು ವಿಶ್ಲೇಷಿಸಿ ಈ ಜೀವನದ ನಿಗೂಢತೆಯತ್ತ ಬೆರಳು ತೋರಿಸುತ್ತದೆ.

ನಡತೆಯ ವಿಷಯದಲ್ಲಿ ಕಟ್ಟುನಿಟ್ಟಾದ ನಿಯಮಗಳಿವೆ. ಪ್ರತಿ ಯಹೂದಿಯೂ ನಿತ್ಯ ಮೂರು ಸಲ ಪ್ರಾರ್ಥನೆ ಮಾಡಬೇಕು. ಧರ್ಮ ಗ್ರಂಥಗಳ ಆಯ್ದಭಾಗಗಳನ್ನು ನಿತ್ಯ ಪಠನ ಮಾಡಬೇಕು. ಸಾಮೂಹಿಕ ಪ್ರಾರ್ಥನೆ ಇವರ ಪದ್ಧತಿ. ಪವಿತ್ರವಾದ ಗೃಹಜೀವನವನ್ನು ಎದು ಬೋಧಿಸುತ್ತದೆ. ಇತಿಹಾಸದುದ್ದಕ್ಕೂ ಮನೆಯನ್ನೇ ದೇವರ ಆವಾಸಸ್ಥಾನವಾಗಿ ಮಾಡಲು ಈ ಜನ ಯತ್ನಿಸಿದ್ದಾರೆ. ಇಲ್ಲಿ ಕೌಟುಂಬಿಕ ಜೀವನಕ್ಕೆ ಗೌರವವಿದೆ. ಗಂಡನು ಹೆಂಡತಿಯ ಮೂಲಭೂತ ಹಕ್ಕನ್ನು ನಿರಾಕರಿಸಬಾರದು. ಅವರಿಬ್ಬರ ಸಂಬಂಧ ಪವಿತ್ರವಾದುದು. ಮಾಂಸಾಹಾರಿಗಳಾದರೂ ಇವರು ಪ್ರಾಣಿಗಳನ್ನು ಕೊಲ್ಲುವ ವಿಷಯದಲ್ಲಿ ಕೆಲ ನಿಯಮಗಳನ್ನು ಪಾಲಿಸುತ್ತಾರೆ. ಹಾಗೆಯೇ ಬಡವರು, ದುರ್ಬಲರು, ಸೆರೆಯಾಳುಗಳು, ಪೀಡಿತರ ವಿಚಾರದಲ್ಲಿ ದಯೆಯಿಂದ ನಡೆದುಕೊಳ್ಳುವಂತೆ ಈ ಧರ್ಮಬೋಧಿಸುತ್ತದೆ. ಅಲ್ಲದೆ ಸಹಜೀವಿಯನ್ನು ದ್ವೇಷಿಸುವುದೆಂದರೆ ದೇವರನ್ನು ದ್ವೇಷಿಸಿದಂತೆಯೇ. ನೆರೆಯವನ ಸಂಪತ್ತು ಗೌರವಗಳ ರಕ್ಷಣೆಯ ಹೊಣೆ ಎಲ್ಲರ ಮೇಲಿದೆ. ಶತ್ರುವಿನ ವಿಷಯದಲ್ಲಿ ಮಾತ್ರ ಅವನನ್ನು ಕ್ಷಮಿಸಬಹುದು; ಪ್ರೀತಿಸಲಾಗದು. ಏಕೆಂದರೆ ನ್ಯಾಯವಿಲ್ಲದ ಪ್ರೀತಿ ದುರುಪಯೋಗವಾಗುತ್ತದೆ. ಸ್ವರ್ಗ, ನರಕ, ಪುನರ್ಜನ್ಮಗಳನ್ನು ಅವರು ನಂಬುತ್ತಾರೆ. ಮೆಸೈಯ ಅವತರಿಸಿ ಪವಿತ್ರ ಜೆರುಸಲೆಮಿನಲ್ಲಿ ತನ್ನ ಶಾಂತಿರಾಜ್ಯವನ್ನು ಸ್ಥಾಪಿಸುತ್ತಾನೆಂಬುದು ಅವರ ವಿಶ್ವಾಸ.

ಇದು ಕರ್ಮಾಚರಣೆಯ ಶಿಷ್ಟಾಚಾರದ ಧರ್ಮ. ಉತ್ಸವಾಚರಣೆಗಳ ಪಾತ್ರ ಯಹೂದಿಗಳಲ್ಲಿ ದೊಡ್ಡದು. ವಿಶ್ರಾಂತಿ ದಿನವಾಗಿ ಸಬ್ಬತ್, ಏಕ್ಸೋಡಸ್ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳ ನೆನಪಿಗಾಗಿ ಪಾಸ್ ಓವರ್ ಹಬ್ಬಗಳು ನಡೆಯುತ್ತವೆ. ಪರಟಕೋಸ್ಟ್, ದೇವರು ಶಾಸನ ವಿಧಿಸಿದ್ದರೊಂದಿಗೆ ಹೊಂದಿಕೊಂಡರೆ, ಮರಳುಗಾಡಿನಲ್ಲಿ ಅಲೆಯುತ್ತಿದ್ದಾಗ ಗುಡಾರಗಳಲ್ಲಿ ತಂಗುತ್ತಿದ್ದುದರ ನೆನಪು ತಬರ್ನಕಲ್ಸ್, ದಿ ಡೇ ಆಫ್ ರಿಮೆಂಬರೆನ್ಸ್ (ಹೊಸವರ್ಷ) ಕಳೆದ ವರ್ಷದ ಆತ್ಮ ನಿರೀಕ್ಷಣೆಯ ದಿನ. ಈ ಆಚರಣೆಗಳೆಲ್ಲವೂ ತಮ್ಮ ಜನರ ಸಂಘಟನೆಯ ಉದ್ದೇಶದಿಂದಲೇ ಇವೆಯೆಂಬುದನ್ನು ಪ್ರವಾದಿಗಳು ಆಗಿಂದಾಗ್ಗೆ ಸ್ಪಷ್ಟಪಡಿಸಿದ್ದಾರೆ. ಪ್ರಪಂಚದ ಎಲ್ಲ ಕಡೆಯ ಪ್ರವೃತ್ತಿಯಂತೆಯೇ ಈ ಧರ್ಮದಲ್ಲೂ ಈಗ ಅತಿ ನಿಷ್ಠಾವಂತರು, ಪರಿವರ್ತನಶೀಲರು ಮತ್ತು ಸಮನ್ವಯ ಶೀಲರನ್ನು ಕಾಣಬಹುದಾಗಿದೆ.											 
 (ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ